ಮಿನ್ಸ್ಕ್
ಸೋವಿಯೆತ್ ಸಮಾಜವಾದಿ ಗಣರಾಜ್ಯದ ಬ್ಯೆಲೋರಷ್ಯಾದ ಒಂದು ಪ್ರಾಂತ್ಯ ಹಾಗೂ ಅದರ ಆಡಳಿತ ಕೇಂದ್ರ ನಗರ. ಸ್ವೀಸ್‍ಲಾಚ್‍ನದಿ ತೀರದಲ್ಲಿರುವ ಈ ನಗರ ಮಾಸ್ಕೊ ನಗರದ ಪಶ್ಚಿಮಕ್ಕೆ 756 ಕಿಮೀ ದೂರದಲ್ಲಿದೆ. ಜನಸಂಖ್ಯೆ 1,442,000 (1984).

	ಕೈಗಾರಿಕಾ ಕೇಂದ್ರವಾದ ಈ ನಗರದಲ್ಲಿ ರೇಡಿಯೊ, ಟ್ರಕ್ ಮತ್ತು ಟ್ರ್ಯಾಕ್ಟರ್‍ಗಳನ್ನೂ ವಿವಿಧ ಯಂತ್ರೋಪಕರಣಗಳನ್ನೂ ತಯಾರಿಸುವ ಕಾರ್ಖಾನೆಗಳಿವೆ. ಮರಗೆಲಸಕ್ಕೆ ಸಂಬಂಧಿಸಿದ ಅನೇಕ ಉದ್ಯಮಗಳಿವೆ. ಮಾಸ್ಕೊ ವಾರ್ಸಾ (ಪೋಲೆಂಡ್) ರೈಲು ಮಾರ್ಗದ ಒಂದು ಮುಖ್ಯ ನಿಲ್ದಾಣ. ಇಲ್ಲಿ ಇತರ ಸಂಪರ್ಕ ಸಾಧನಗಳಿವೆ. ಬ್ಯೆಲೊರಷ್ಯನ್ ರಾಜ್ಯ ವಿಶ್ವವಿದ್ಯಾಲಯ, ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳು, ವಿಜ್ಞಾನ ಅಕಾಡೆಮಿ, ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಆಧುನಿಕವಾಗಿ ಸಜ್ಜಾದ ಬೃಹತ್ ರಂಗಮಂದಿರ ಮುಂತಾದವುಗಳು ಇಲ್ಲಿವೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಹೆಚ್ಚು ನಷ್ಟಕ್ಕೊಳಗಾಗಿದ್ದು ಈಗ ಆಧುನಿಕ ಕಟ್ಟಡಗಳಿಂದ ಕೂಡಿದ ಒಂದು ಪ್ರಮುಖ ನಗರವೆನಿಸಿದೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ